ಜರ್ಮನ್ ವಾಸ್ತು, ಶಿಲ್ಪ, ಕಲೆ- 

ಜರ್ಮನ್ ಎಂದು ನಿರ್ದಿಷ್ಟವಾಗಿ ಹೇಳಬಹುದಾದ ಕಲಾಸಂಪ್ರದಾಯ ಆಟೋನಿಯನ್ ಕಾಲದಲ್ಲಿ ಆರಂಭವಾಗಿ ಮುಂದೆ ಫ್ರಾನ್ಸ್, ಇಟಲಿ ಮುಂತಾದ ದೇಶಗಳೊಂದಿಗೆ ಆದ ಸಾಂಸ್ಕøತಿಕ ವಿನಿಮಯದಿಂದ ವಿಶಿಷ್ಟ ರೀತಿಯಲ್ಲಿ ಬೆಳೆಯಿತು. ಈ ಬೆಳವಣಿಗೆಯ ಘಟ್ಟಗಳನ್ನು ಕೆಳಕಂಡಂತೆ ವಿವರಿಸಬಹುದು : I ಆಟೋನಿಯನ್, II ರೋಮೆನೆಸ್ಕ್, III ಗಾತಿಕ್, Iv ಪುನರುಜ್ಜೀವನ ಕಾಲ ಮತ್ತು ಮ್ಯಾನರಿಸಂ, v ಬರೋಕ್ ಮತ್ತು ರೋಕೋಕೋ, vI 19ನೇ ಶತಮಾನ, vII ಆಧುನಿಕ.

1 ಆಟೋನಿಯನ್ ಕಾಲದ (10ನೆಯ ಶತಮಾನದ ಮಧ್ಯದಿಂದ 11ನೆಯ ಶತಮಾನದವರೆಗೆ) ಜರ್ಮನ್ ವಾಸ್ತುಶಿಲ್ಪಕಲೆಯ ಜ್ಞಾನ ಅಂದಿನ ಕಟ್ಟಡಗಳ ತಳಪಾಯ ಹಾಗೂ ಇತರ ಬಿಡಿ ಭಾಗಗಳಿಗೆ ಸೀಮಿತವಾದ್ದು. ಮ್ಯಾಗ್ಡಬರ್ಗ್‍ನ ಪ್ರಥಮ ಜರ್ಮನ್ ಇಂಪೀರಿಯಲ್ ಕತೀಡ್ರಲ್‍ನ (ಕ್ರಿ.ಸ. 955) , ಬೆಲ್ಜಿಯಮ್‍ನ ಲೀಯೆಜ್ (1015), ಮೈಂಟ್ಸ್ (975), ವೋಮ್ಸ್ (1018), ಸ್ಟ್ರಾಸ್ ಬರ್ಗ್ (1015) ಮುಂತಾದ ಕಡೆಗಳಲ್ಲಿರುವ ಕತೀಡ್ರಲ್‍ಗಳ ಕಟ್ಟಡಗಳ ಆಸ್ಪಿವಾರಗಳಿಂದ ಅಟೋನಿಯನ್ ವಾಸ್ತು ಲಕ್ಷಣಗಳನ್ನು ಅರಿಯಬಹುದು. ಆ ಕಾಲದವಾಗಿ ಉಳಿದಿರುವ ಕಟ್ಟಡಗಳು ಬಲು ವಿರಳವಾದರೂ ಎಚ್ಚರಿಕೆಯಿಂದ ರಕ್ಷಿಸಿಟ್ಟಿರುವ ಕಟ್ಟಡಗಳಲ್ಲಿ ಆಟೋನಿಯನ್ ಕಾಲದ ವಾಸ್ತುಕಲಾ ಸ್ವರೂಪವನ್ನು ಅರಿಯಬಹುದು. ಹಿಲ್ಡಸ್ ಹೈಮ್‍ನ ಸೇಂಟ್ ಮೈಕಲ್ ಚರ್ಚ್ ಇವುಗಳಲ್ಲಿ ಮುಖ್ಯವಾದ್ದು. ಇದರ ನಿರ್ಮಾಣವನ್ನು ಬಿಷಪ್ ಬರ್ನ್‍ವಾರ್ಡ್ 1000ರಲ್ಲಿ ಆರಂಭಿಸಿದ. ಇದರಲ್ಲಿನ ವಿವಿಧಾಂಗಗಳಲ್ಲಿ ಉತ್ತಮ ಸಮತೋಲವಿರುವಂತೆ ಎಚ್ಚರಿಕೆಯಿಂದ ರೂಪಿಸಲಾಗಿರುವ ತಳವಿನ್ಯಾಸದಲ್ಲಿ ಮೂರು ಉದ್ದಸಾಲೆಗಳಾಗಿ ವಿಭಜಿತವಾಗಿರುವ ಒಂದು ದೊಡ್ಡ ಹಜಾರ, ಅದನ್ನು ಸಮಕೋನದಲ್ಲಿ ಅಡ್ಡ ಹಾಯ್ದು ಶಿಲುಬೆಯ ವಿನ್ಯಾಸವನ್ನು ರಚಿಸುವ ಅಡ್ಡಸಾಲೆ, ಇದಕ್ಕೆ ಸೇರಿದಂತೆ ಅರ್ಧವೃತ್ತಾಕರದ ಮೂರು ಕೋಷ್ಟಗಳು ಮತ್ತು ಅದರ ಎದುರಬದಿಯಲ್ಲಿ ಗೀತರಂಗ (ಕ್ವೈಯರ್ ) —ಈ ಭಾಗಗಳಿವೆ. ಏರು ವಿನ್ಯಾಸದಲ್ಲಿ ಮೇಗಣ ಭಾರವನ್ನು ಹೊರುವಂತಿರುವ ಕಂಬಗಳು ಭಿತ್ತಿಯ ಅಲಂಕಾರವಾಗಿವೆ. ಚೌಕಾಕಾರದ ಬೋದಿಗೆಯನ್ನು ಹೊಂದಿರುವ ಇಲ್ಲಿಯ ಕಂಬಗಳಲ್ಲಿ ಹೊಸ ಸಂಪ್ರದಾಯದ ನಾಂದಿಯಲ್ಲಿ ಗುರುತಿಸಬಹುದು. ಹೊರಭಾಗ ಅನೇಕ ಜ್ಯಾಮಿತಿಯ ಅಲಂಕರಣಗಳಿಂದ ಕೂಡಿದ್ದು ಕಟ್ಡಡದ ಪ್ರತಿಯೊಂದು ಅಂಗವೂ ಮತ್ತೊಂದರಿಂದ ಸ್ಪಷ್ಟವಾಗಿ ಬೇರ್ಪಟ್ಟಿರುವಂತೆ ರಚಿತವಾಗಿದೆ. ಇಲ್ಲಿಯ ಮತ್ತೊಂದು ಮುಖ್ಯ ಅಂಶವೆಂದರೆ ಜರ್ಮನ್ ಕಲೆಯು ಪ್ರಪ್ರಥಮ ಶಿಲ್ಪ ಕಲಾ ಕೃತಿಗಳನ್ನು ಪ್ರತಿನಿಧಿಸುವ ಶಿಲ್ಪಗಳನ್ನು ಹೊಂದಿರುವ 16' ಎತ್ತರವಿರುವ ಎರಕದ ಕಂಚಿನ ಬಾಗಿಲುಗಳು.

ಆಟೋನಿಯನ್ ಕಾಲದ ಕಲೆಗೆ ಸ್ಫೂರ್ತಿಯ ನೆಲೆಯೆಂದರೆ ಕ್ರಿ.ಶ. 8-11ನೆಯ ಶತಮಾನಗಳಲ್ಲಿ ಪಶ್ಚಿಮ ಯೂರೋಪಿನಲ್ಲಿ ಪ್ರಚಲಿತವಾಗಿದ್ದ ಕಾರೊಲಿಂಗಿಯನ್ ಕಾಲದ ಕಲಾಕೃತಿಗಳು. ಬಿeóÁಂಟಿನ್ ಮತ್ತು ರೋಮನ್ ಕಲೆಯ ಪ್ರತಿರೂಪಗಳೂ ಜರ್ಮನ್ ಶಿಲ್ಪಕಲೆಯ ಅಲಂಕರಣದ ಮತ್ತು ಚಿತ್ರಕಲೆಯ ಸ್ಫೂರ್ತಿಗಳಾದುವು. ಈ ಕಾಲದ ಜರ್ಮನ್ ಕಲಾಕೃತಿಗಳು ನಿರೂಪಣೆಯಲ್ಲಿ ಭವ್ಯವೂ ಭಾವಗರ್ಭಿತವು ಆಗಿರುವುದಲ್ಲದೆ ಹೆಚ್ಚಾಗಿ ದೈವಿಕ ವಿಷಯಗಳಿಂದ ತುಂಬಿರುತ್ತವೆ. ಭಾವದ ಬಿಗಿ ಮತ್ತು ಪಾರಮಾರ್ಥಿಕ ದೃಷ್ಟಿ ಇವುಗಳ ವೈಶಿಷ್ಟ್ಯ.

ಹಿಲ್‍ಡಸ್‍ಹೈಮ್‍ನಲ್ಲಿರುವ ಮೈಕಲ್ ಇಗರ್ಜಿಯ ಕಂಚಿನ ಎರಕದ ಬಾಗಿಲುಗಳು ಆಟೋನಿಯನ್ ಕಾಲದ ಶಿಲ್ಪಕ್ಕೆ ಉತ್ತಮ ಉದಾಹರಣೆ. ಆ ಕಾಲದಲ್ಲಿ ಪ್ರಭಾವಿಯಾಗಿದ್ದ ಸ್ಯಾಕ್ಸನ್ ಮಾದರಿಯ ಶಿಲ್ಪಗಳ ಮುಖ್ಯವಾದ ಗುಂಪೊಂದು ಈ ಸುಂದರವೂ ಬೃಹದಾಕಾರದ್ದೂ ಆಗಿರುವ ಬಾಗಿಲುಗಳ ಮೇಲೆ ಇದೆ. ಅಲಂಕರಣ ಕೆತ್ತನೆಗಳು ಹಿಂದಿನ ಕಾರೋಲಿಂಗಿಯನ್ ಶೈಲಿಯಲ್ಲಿವೆ. ಚಕ್ರವರ್ತಿ ಎರಡನೆಯ ಹೆನ್ರಿಯಿಂದ ನಿಯೋಜಿತವಾದ ಬಾಸಲ್ ಕತೀಡ್ರಲ್ ಪವಿತ್ರ ಪೀಠದ ಮುಂದಿನ ತೆರೆ ಕಲೋನ್ ಕತೀಡ್ರಲ್‍ನ ಜೀರೋಕ್ರಾಸ್ (ಕ್ರಿ.ಸ. 970). ಜರ್ಮನಿಯ ಮರೋನ್ ಶಿಲ್ಪಗಳಲ್ಲಿ ಅತ್ಯಂತ ಪುರಾತನವಾದ ಎಸೆನ್‍ನ ಮಡೊನ ಮುಂತಾದವು ಈ ಕಾಲದ ಪ್ರಮುಖ ಕಲಾಕೃತಿಗಳು.

ಈ ಕಾಲದಲ್ಲಿ ಚಿನ್ನ, ಬೆಳ್ಳಿ ಮತ್ತು ದಂತದ ಕುಶಲ ಕೈಗಾರಿಕೆ ಸಹ ಬಹಳ ಮಟ್ಟಿಗೆ ಪ್ರಗತಿ ಸಾಧಿಸಿತ್ತು. ರೈಕವೌ ದ್ವೀಪದ ಸಂನ್ಯಾಸಿ ಮಠಗಳು, ಬ್ಯಾಂಬರ್ಗಿನ ಕ್ರೈಸ್ತಮಠಗಳೇ ಮೊದಲಾದವು ಈ ಕೈಗಾರಿಕೆಗಳ ಮುಖ್ಯ ಕೇಂದ್ರಗಳು. ಈ ಕಾಲದ ಚಿನ್ನದ ಆಭರಣಗಳಲ್ಲಿ ಮತ್ತು ಇತರ ಕುಶಲ ಕೃತಿಗಳಲ್ಲಿ ಬಿeóÁಂಟಿನ್ ಕಲೆಯ ಪ್ರಭಾವವನ್ನು ಕಾಣಬಹುದು. ಜೌಬೆನ್‍ನ ಲೋಥರ್ ಕ್ರಾಸ್ (ಸು. 980) ಮತ್ತು ಟ್ರೇರ್‍ನ ಸೇಂಟ್ ಆಂಡ್ರ್ಯೂವಿನ ಸಂಪುಟ (977-83) ಇತ್ಯಾದಿ ಇನ್ನೂ ಅನೇಕ ವಸ್ತುಗಳು ಈ ಕಾಲದ ಸೂಕ್ಷ್ಮಕಲೆಯ ಉತ್ಕøಷ್ಟ ಕೃತಿಗಳು.

ಆಟೋನಿಯನ್ ಕಾಲದಲ್ಲಿ ಚಿತ್ರಿತ ಹಸ್ತಪ್ರತಿಗಳ ತಯಾರಿಕೆಯೂ ಅಸಾಧಾರಣ ಪ್ರಗತಿಯನ್ನು ಸಾಧಿಸಿತ್ತು. ಇದರ ಮುಖ್ಯವಾದ ಜರ್ಮನ್ ಪಂಥವೆಂದರೆ ರೈಕ್‍ನೌ ದ್ವೀಪದ್ದು. ಕೆರಾಲ್ಡ್ ಮತ್ತು ಹೆರಿಬರ್ಟ್ ಎಂಬಿಬ್ಬರು ಪಾದ್ರಿಗಳು ಚಿತ್ರಸಹಿತ ಬರೆದು ಅಲಂಕರಿಸಿದ ಕ್ರೈಸ್ತಧರ್ಮದ ಕೆಲವು ಪ್ರಕರಣಗಳುಳ್ಳ ಕೋಡೆಕ್ಸ್ ಎಗ್ಬೆರ್ಟಿ ಎಂಬ ಹಸ್ತಪ್ರತಿ (ಸು.990) ಮುಖ್ಯವಾದುದು. ಇದರಲ್ಲಿನ ಐವತ್ತು ಸೂಕ್ಷ್ಮಚಿತ್ರಗಳು ಯೇಸುವಿನ ಜೀವನಕ್ಕೆ ಸಂಬಂಧಿಸಿದ ಜರ್ಮನ್ ಕಲೆಯ ಮೊಟ್ಟಮೊದಲ ಚಿತ್ರಗಳು. ಪ್ರತಿಮಾಚಿತ್ರದ ಪ್ರಕಾರ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಇವು ತಮ್ಮ ಹಿಂದಿನ ಅಂದರೆ ಕ್ರಿ.ಶ. 4-6ನೆಯ ಶತಮಾನದ ಮಾದರಿಗಳನ್ನು ಹೋಲುತ್ತವೆ. ಇವಲ್ಲದೆ ರೈಕ್‍ನೌ ಪಂಥದಲ್ಲಿ ಜಿರೋ ಕೋಡೆಕ್ಸ್ (ಸು. 970). ಕೋಡೆಕ್ಸ್ ಆಫ್ ದಿ ಗಾಸ್ಟೆಲ್ ಬುಕ್ ಆಫ್ ಆಟೋ 3 (ಸು.1000), ಮುಂತಾದ ಇನ್ನೂ ಅನೇಕ ಕೃತಿಗಳು ರಚಿಸಲ್ಪಟ್ಟುವು. ಇವು ಉತ್ಸವ ಸಮಾರಂಭಗಳ ಚಿತ್ರಗಳು ಮತ್ತು ಯಥೇಚ್ಚವಾದ ಅಲಂಕರಣಗಳಿಂದ ಕೂಡಿದ ಕ್ರೈಸ್ತಧರ್ಮದ ಪುಸ್ತಕಗಳು ರೈಕ್‍ನೌ ಶೈಲಿ ಪವಿತ್ರ ರೋಮನ್ ಸಾಮ್ರಾಜ್ಯದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಿಗೂ ಆವರಿಸಿತು. ಟ್ರೀರ್ ಗ್ರಿಗೋರಿ ಪ್ರಾಯಶಃ ಆ ಕಾಲದ ಶ್ರೇಷ್ಠ ಕಲೆಗಾರ ರೀಗೆನ್ಸ್ ಬರ್ಗ್‍ಪಂಥದ ಚಿತ್ರಿತ ಹಸ್ತಪ್ರತಿಗಳು ಬಹಳವಾಗಿ ಧಾರ್ಮಿಕ ವಿದ್ವತ್ತಿನ ಒಂದು ಮುಖ್ಯವಾದ ವಾಹಕವಾಗಿ ಪರಿಣಮಿಸಿದ್ದುವು. ಚಿತ್ರಗಳ ಜ್ಯಾಮಿತಿಯ ವಿಂಗಡನೆ, ವೈವಿಧ್ಯಮಯವಾದ ಮತ್ತು ವಿವರಣಾತ್ಮಕವಾದ ಪುರಾಣ ಕಥೆಗಳ ಅಳವಡಿಕೆ ಈ ಪಂಥದ ಮುಖ್ಯ ಅಂಶಗಳು, ಅಟೋನಿಯನ್ ಕಾಲದಲ್ಲಿ ಅದ್ಭುತವಾದ ವರ್ಣಮಯವಾದ ಭಿತ್ತಿಚಿತ್ರಗಳು ಬರೆಯಲ್ಪಟ್ಟವು. ಆದರೆ ಈಗ ಕೆಲವು ತುಣುಕುಗಳು ಮಾತ್ರ ಉಳಿದಿವೆ.

ರೋಮನೆಸ್ಕ್ ಕಾಲದಲ್ಲಿ (11ನೆಯ ಶತಮಾನದಿಂದ 13ನೆಯ ಶತಮಾನದ ಮಧ್ಯ ಭಾಗದವರೆಗೆ) ವಾಸ್ತುಶಿಲ್ಪದ ಅಂಗಗಳ ರೂಪಣೆಯಲ್ಲಿ ಕೆಲವು ಬದಲಾವಣೆಗಳಾದುವು. ಅವುಗಳಲ್ಲಿ ಮುಖ್ಯವಾದುದೆಂದರೆ ಚರ್ಚಿನ ಚಾವಣಿಯನ್ನು ಕಮಾನಿನಾಕಾರ ಮಾಡಿದ್ದು. ಆಟೋನಿಯನ್ ಕಾಲದ ಸರಳ ಗೋಡೆಗಳಿಗೆ ಬದಲಾಗಿ ಉಬ್ಬು ವಿನ್ಯಾಸಗಳಿಂದ ಗೋಡೆಯನ್ನು ರಚಿಸಲಾಯಿತು. ಪಶ್ಚಿಮ ಮತ್ತು ಪೂರ್ವದ ಎರಡು ತುದಿಗಳಲ್ಲೂ ಅರ್ಧವೃತ್ತಾಕಾರದ ಕೋಷ್ಟಗಳನ್ನು ರಚಿಸಿ, ಪಕ್ಕಗಳಲ್ಲಿ ಇಳಿಚಾವಣಿಯುಳ್ಳ ಎತ್ತರದ ಗೋಪುರಗಳನ್ನು ರಚಿಸುವ ಪದ್ಧತಿ ಬೆಳೆಯಿತು. ಸ್ಪೇಯರ್ ಕತೀಡ್ರಲ್ ರೋಮನೆಸ್ಕ್ ಶೈಲಿಯ ಮೊದಲ ಹಾಗೂ ಉತ್ತಮ ಉದಾಹರಣೆ. ಇದರ ತಳವಿನ್ಯಾಸ ದೀರ್ಘ ಚತುರಸ್ರಾಕಾರವಾಗಿದ್ದು ಮಧ್ಯದ ಎರಡು ಕಂಬಗಳ ಸಾಲಿನಿಂದ ಮೂರು ಹಜಾರಗಳಾಗಿ ವಿಂಗಡಣೆ ಹೊಂದಿದೆ. ಮಧ್ಯದ ಹಾಗೂ ಇಕ್ಕೆಲಗಳ ಹಜಾರಗಳು ಮೇಲ್ಭಾಗದಲ್ಲಿ ಕಮಾನಿನಾಕಾರದ ಚಾವಣಿಯನ್ನು ಹೊಂದಿವೆ. ಇದು ಅನಂತರದ ಮೈಂಟ್ಸ್ ಮತ್ತು ವೋಮ್ಸ್‍ನ ಇಗರ್ಜಿಗಳಿಗೆ ಮಾದರಿಯಾಯಿತು. ಆ ಕಾಲದ ಇನ್ನಿತರ ಸಣ್ಣ ಸಣ್ಣ ಇಗರ್ಜಿಗಳಲ್ಲಿ ರೋಮನೆಸ್ಕ್ ಶೈಲಿಯ ಸ್ವರೂಪವನ್ನು ಇನ್ನೂ ಚೆನ್ನಾಗಿ ಕಾಣಬಹುದು. ಅವುಗಳಲ್ಲಿ ಹಿರಸುವಿನ ಸೇಂಟ್ ಆರೀಲಿಯಸ್, ಸೇಂಟ್ ಪಿಟರ್ ಮತ್ತು ಸೆಂಟ್ ಪಾಲ್ ಇಗರ್ಜಿಗಳು ಈ ಕಾಲದ ಶಿಲ್ಪಾಲಂಕೃತ ವಾಸ್ತುವಿಗೆ ಉತ್ತಮ ಉದಾಹರಣೆಗಳು.

ಆಟೋನಿಯನ್ ಕಾಲದಲ್ಲಿದ್ದ ರಚನಾತ್ಮಕ ಮನೋಭಾವ ರೋಮನೆಸ್ಕ್ ಕಾಲದಲ್ಲಿ ತೆಳುವಾಯಿತು. ನವೋನ್ವೇಷಣ ಶಕ್ತಿ ಕಡಿಮೆಯಾಗಿ ಅಲಂಕರಣ, ನಿರೂಪಣೆ ಮುಂತಾದ ವಿಷಯದಲ್ಲಿ ಸ್ಥಾಯೀ ಮನೋಭಾವ ಬೇರೂರಿತು. ಸು. 12ನೆಯ ಶತಮಾನದ ಮಧ್ಯಭಾಗದಲ್ಲಿ ಇದರ ಪ್ರಭಾವ ಅತ್ಯಂತ ಹೆಚ್ಚು. ಅನಂತರ ಈ ರೀತಿಯ ಸೆಳೆತ ಇಳಿಮುಖವಾಗಿ ಶಿಲ್ಪದ ರೂಪಣೆಗಳು ಸ್ವಲ್ಪಮಟ್ಟಿಗೆ ಜೀವಂತವಾಗಿ ಕಾಣಲಾರಂಭಿಸಿದವು.
ಈ ಕಾಲದಲ್ಲಿ ರೈನ್ ನದಿಯ ಕೆಳಪ್ರದೇಶ ಮತ್ತು ಮ್ಯೂಸ್ ಭಾಗಗಳಲ್ಲಿ ಸುಂದರವಾದ ಚಿನ್ನದ ವಸ್ತುಗಳು ರಚಿತವಾದವು. 1100ರಲ್ಲಿ ರೋಜರ್ ಎಂಬಾತ ಮಾಡಿದ ಅನೇಕ ಪವಿತ್ರ ಪೀಠಗಳು ಮತ್ತು ಶಿಲುಬೆಗಳು ಅಲ್ಲದೆ ಅಲಂಕರಿಸಿದ ಬೆಳ್ಳಿಯ ಫಲಕಗಳು, ಆಭರಣಗಳು ಇತ್ಯಾದಿ ಕೃತಿಗಳು ಅತಿಮುಖ್ಯವಾದವು. ರೀನಿಯರ್ ಡ ವೀ ಎಂಬಾತ ರೋಜರನ ಸಮಕಾಲೀನ. ಈತನ ಕೃತಿಗಳಲ್ಲಿ ಕಾರೋಲಿಂಗಿಯನ್ ಮತ್ತು ರೋಮನೆಸ್ಕ್ ಶೈಲಿಗಳ ಸಮ್ಮಿಳನ ಕಾಣುತ್ತದೆ. ವರ್ಡನ್ನಿನ ನಿಕಲಸ್ ಈ ಕಾಲದ ಅತ್ಯಂತ ಶ್ರೇಷ್ಠ ಅಕ್ಕಸಾಲಿ. ಈತನವು ಆ ಕಾಲದ ಎಲ್ಲ ಕೃತಿಗಳಿಗಿಂತ ಸುಂದರವಾದವು.
ರೋಮನೆಸ್ಕ ಕಾಲದ ಫ್ರೆಸ್ಕೋ ವಿಧಾನದಲ್ಲಿ ಮಾಡಿದ ಜರ್ಮನ್ ಭಿತ್ತಿಚಿತ್ರಗಳು ಬರ್ಗ್‍ಫೆಲ್ಡನ್, ಇಡೆನ್ಸೆನ್ ಮುಂತಾದೆಡೆಗಳಲ್ಲಿ ಅನೇಕ ಸಂಖ್ಯೆಯಲ್ಲಿವೆಯಾದರೂ ಅವು ಅನಂತರದ ಚಿತ್ರಕಾರರ ಕೈಯಲ್ಲಿ ಬಹಳ ಮಾರ್ಪಾಟು ಹೊಂದಿದ್ದು ತಮ್ಮ ಮೂಲ ಸ್ಥಿತಿಯನ್ನು ಉಳಿಸಿಕೊಂಡಿಲ್ಲ. ಜರ್ಮನಿಯ ಅತ್ಯಂತ ಪ್ರಾಚೀನವಾದ ಗಾಜಿನ ಮೇಲಿನ ವರ್ಣಚಿತ್ರಗಳು ಆಗ್ಸ್‍ಬರ್ಗ್‍ನಲ್ಲಿ ಇವೆ (1130-40).
ರೋಮನೆಸ್ಕ್ ಕಾಲದ ಚಿತ್ರಿತ ಜರ್ಮನ್ ಹಸ್ತಪ್ರತಿಗಳು ಆಟೋನಿಯನ್ ಕಾಲದ ಹಸ್ತಪ್ರತಿ ತಯಾರಿಕೆಯ ಮುಖ್ಯ ಕೇಂದ್ರ. ಇಲ್ಲಿ ತಯಾರಿಸಲಾದ ಗೆಬ್‍ಹಾರ್ಟ್ ಬೈಬಲ್ (12ನೆಯ ಶತಮಾನ) ಮತ್ತು ಸೇಂಟ್ ಪೀಟರನ ಆ್ಯಂಟಿಘೋನರಿ (ಸು. 1150) ಮುಂತಾದವು ಮುಖ್ಯವಾದವು. ಜರ್ಮನಿಯ ಮೊದಲ ಭೂದೃಶ್ಯ ಚಿತ್ರಗಳು ಸು. 1225 ರಲ್ಲಿ ರಚಿತವಾದ ಕಾರ್ಮಿನ ಬುರಾನ ಎಂಬ ಚಿತ್ರ ಗ್ರಂಥದಲ್ಲಿ ಕಂಡುಬಂದಿದೆ. ಉತ್ತರ ರೈನ್ ಭಾಗದಲ್ಲಿ ಹೆರಾಡ್ ಪಾನ್ ಲ್ಯಾಂಡ್ಸ್ ಬರ್ಗ್ ಎಂಬಾತ ಮಧ್ಯಯುಗದ ಪ್ರತಿಮಾಶಾಸ್ತ್ರದ ಬಗ್ಗೆ ಒಂದು ಸಚಿತ್ರ ಸಂಹಿತೆಯಲ್ಲಿ ರಚಿಸಿದ.

ಸ್ವೇಬಿಯ ರುಡಾಲ್ಫ್‍ನ ಸಮಾಧಿ ಫಲಕ (ಸು. 1080), ಗೇರ್ಸ್ ರೋಡನ ಪವಿತ್ರ ಸಮಾಧಿ (ಸು. 1120). ಕ್ವೆಡ್ಲಿನ್‍ಬರ್ಗ್‍ನ ಸಮಾಧಿಕಲ್ಲು (ಸು. 1130) ಇತ್ಯಾದಿ ಇನ್ನೂ ಅನೇಕ ಕೃತಿಗಳು ಈ ಕಾಲದ ಶ್ರೇಷ್ಠ ಶಿಲ್ಪದ ಸಾಲಿಗೆ ಸೇರಿದವು.

13-14ನೆಯ ಶತಮಾನಗಳು ಜರ್ಮನ್ ಗಾತಿಕ್ ಸಂಪ್ರದಾಯದ ಕಾಲ. ಫ್ರೆಂಚ್-ಗಾತಿಕ್ ವಾಸ್ತು ಸಂಪ್ರದಾಯದ ಪ್ರಭಾವ 13ನೆಯ ಶತಮಾನದ ಜರ್ಮನ್ ವಾಸ್ತುರಚನೆಯ ಪ್ರಮುಖ ಲಕ್ಷಣ. ಮೊದಮೊದಲು ಜರ್ಮನ್ ವಾಸ್ತು ಕೃತಿಗಳಲ್ಲಿ ಫ್ರೆಂಚ್ ಗಾತಿಕ್ ಶೈಲಿಯ ಬಿಡಿ ರೂಪಗಳು ಮಾತ್ರವಿದ್ದು ಕಟ್ಟಡ ಮೂಲತಃ ರೋಮನೆಸ್ಕ್ ಶೈಲಿಯದಾಗಿರುತ್ತಿತ್ತು. ಅನಂತರ ತಳವಿನ್ಯಾಸ ಮುಖವಿನ್ಯಾಸ ಇತ್ಯಾದಿಗಳ ನಿರೂಪಣೆಯಲ್ಲೂ ಫ್ರೆಂಚ್ ಗಾತಿಕ್ ಮಾದರಿಗಳನ್ನು ಅಳವಡಿಸಿಕೊಳ್ಳಲಾಯಿತು. ಆದರೂ ಜರ್ಮನ್ ಸಂಪ್ರದಾಯದ ಮೆಟ್ಟಲು ಮೆಟ್ಟಲಾದ ಆಸರೆ ಕಂಬ, ಉಬ್ಬು ಶಿಲ್ಪಾಲಂಕೃತ ಗೋಡೆ ಮುಂತಾದ ಜರ್ಮನ್ ಅಂಶಗಳು ಮುಂದುವರಿದುವು. ಮ್ಯಾಗ್ಡೆಬರ್ಗ್ ಕತೀಡ್ರಲ್ ಮತ್ತು ಲಿಂಬರ್ಗ್ ಕತೀಡ್ರಲ್ ಗಳು ಈ ಶೈಲಿಗಳ ಸಮ್ಮೀಳನದ ಉತ್ತಮ ಉದಾಹರಣೆಗಳು ಕಲೋನ್, ಸ್ಟ್ರಾಸ್‍ಬರ್ಗ್ ಮತ್ತು ರೀಗೆನ್ಸ್‍ಬರ್ಗ್, ಮುಂತಾದೆಡೆಗಳಲ್ಲಿರುವ ಇಗರ್ಜಿಗಳಲ್ಲಿ ಗಾತಿಕ್ ಶೈಲಿಯ ಗಾಢಪ್ರಭಾವ ಎದ್ದು ಕಾಣುತ್ತದೆ. ಹಿಂದಿನಂತೆ ಇವೂ ಮೂಲತಃ ಫ್ರಾನ್ಸಿನ ಗಾತಿಕ್ ಸಂಪ್ರದಾಯದ ಅನುಕರಣೆಗಳು. ಇವುಗಳಲ್ಲಿ ಪ್ರಾಚೀನ ಜರ್ಮನ್ ಅಂಶಗಳಿಗಿಂತಲೂ ಗಾತಿಕ್ ಅಂಶ ಬಹಳ ಹೆಚ್ಚು. ಮಾರ್ಬರ್ಗ್ ಮಿಂಡನ್ ನ್ಯೂರೆಂಬರ್ಗ್. ಮ್ಯೂನಿಕ್ ಇತ್ಯಾದಿ ಕಡೆಗಳಲ್ಲಿ ಜರ್ಮನ್ ಗಾತಿಕ್ ಸಂಪ್ರದಾಯದ ಚರ್ಚುಗಳಿವೆ. ಗಾತಿಕ್ ಸಂಪ್ರದಾಯ ಜರ್ಮನಿಯ ಅನೇಕ ಸಂನ್ಯಾಸಿ ಮಠಗಳ ಕಟ್ಟಡದ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರವ ವಹಿಸಿತು. ಸಿಸ್ಟರ್‍ಸಿಯನ್ ಪಂಗಡದವರು ಹಿಂದಿನ ರೋಮನೆಸ್ಕ್ ಶೈಲಿಯನ್ನು ಮುಂದುವರಿಸಿದರು. ಅಥವಾ ಫ್ರೆಂಚ್ ಶೈಲಿಯ ಪೂರ್ವಕೃತಿಗಳನ್ನು ಅನುಸರಿಸಿದರು. ಆದರೆ ಇತರ ಕ್ರೈಸ್ತ ಸಂನ್ಯಾಸಿ ಪಂಗಡಗಳು ತಮ್ಮವೇ ಆದ ವಿಧಾನವನ್ನು ಬೆಳೆಸಿ ಕೊಂಡವು. ರೀಗೆನ್ಸ್‍ಬರ್ಗ್ ಮತ್ತು ಎಸ್ಲಿಂಗನ್‍ಗಳಲ್ಲಿರುವ ಈ ಪಂಗಡಗಳ ಇಗರ್ಜಿಗಳು ಅವರ ವಾಸ್ತುಶಿಲ್ಪದ ಸರಳತೆಯನ್ನು ತೋರುತ್ತವೆ. ಬಸಿಲಿಕದ ತಳವಿನ್ಯಾಸವುಳ್ಳ ಇವುಗಳಲ್ಲಿ ಅಡ್ಡ ಸಾಲೆಗಳಿಲ್ಲ. ಇವುಗಳ ಮೇಲ್ಭಾಗದಲ್ಲಿ ಕಡಿದಾದ ಚಾವಣಿ ಇದೆ. ಈ ರೀತಿಯ ಇಗರ್ಜಿಗಳು ಆ ಕಾಲದ ವಿವಿಧಾಲಂಕೃತ ಸಿರಿವಂತ ಕತೀಡ್ರಲ್‍ಗಳಿಂದ ಸಂಪೂರ್ಣವಾಗಿ ವಿಭಿನ್ನವಾದವು. 14ನೆಯ ಶತಮಾನದ ಮಧ್ಯಭಾಗದಲ್ಲಿ ಪ್ರವರ್ಧಿಸುತ್ತಿದ್ದ ರಾಜಕೀಯ ಮತ್ತು ಸಾಂಸ್ಕøತಿಕ ಶಕ್ತಿ ಕಲೆಯ ಬೆಳೆವಣಿಗೆಗೆ ಬಹಳ ಸಹಕಾರಿಯಾಯಿತು. ಭವ್ಯವಾದ ಕಟ್ಟಡಗಳು ಆ ಪಟ್ಟಣದ ಸಿರಿತನವನ್ನು ಸಾರುತ್ತಿದ್ದುವು. ಸುಂದರವೂ ಬೃಹದಾಕಾರವೂ ಆದ ಅನೇಕ ಧಾರ್ಮಿಕ ಲೌಕಿಕ ಕಟ್ಟಡಗಳು ಕೋಟೆ ಕೊತ್ತಲಗಳೂ ಜರ್ಮನಿಯ ಹಲವು ಪಟ್ಟಣಗಳಲ್ಲಿ ನಿರ್ಮಿತವಾದವು. ಮಧ್ಯಮ ವರ್ಗದ ಜನರ ಹೊಸ ಆತ್ಮಜ್ಞಾನ ಸಹ ಧಾರ್ಮಿಕ ಶಿಲ್ಪದ ಜೊತೆಗೆ ಅಭಿವ್ಯಕ್ತವಾಯಿತು. ಆಯಾಕಾರದ ತಳವಿನ್ಯಾಸವನ್ನು ಹೊಂದಿದ್ದು ಉದ್ದುದ್ದವಾಗಿ ಮಧ್ಯದಲ್ಲಿ ಮತ್ತು ಇಕ್ಕೆಲಗಳಲ್ಲಿ ಹಜಾರಗಳನ್ನು ಹೊಂದಿದ ಈ ಇಗರ್ಜಿಗಳಲ್ಲಿ ಗೀತರಂಗ ಪ್ರತ್ಯೇಕವಾಗಿರುತ್ತಿರಲಿಲ್ಲ. ಇಂಥ ಹಜಾರ ಚರ್ಚ್‍ಗಳಲ್ಲಿ ಇದುವರೆವಿಗೂ ವಿವಿಧ ಮಟ್ಟದಲ್ಲಿ ಕಟ್ಟುತ್ತಿದ್ದ. ಹಜಾರದ ಮೂರುಸಾಲೆ ಭಾಗಗಳ ಮೇಲ್ಛಾವಣಿಯನ್ನು ಸಮಾನ ಎತ್ತರದಲ್ಲಿ ಕಮಾನಿನಾಕಾರವಾಗಿ ನಿರ್ಮಿಸಲಾಯಿತು. ಮುಂಭಾಗದಲ್ಲಿರುತ್ತಿದ್ದ ಎರಡು ಗೋಪುರಗಳ ಬದಲಾಗಿ ಒಂದೇ ಒಂದು ಗೋಪುರವುಳ್ಳ ಅಥವಾ ಅದೂ ಇಲ್ಲದ ನಿರ್ಮಾಣ ಸಾಮಾನ್ಯವಾಯಿತು. ಉನ್ನತವಾದ ಮೇಲ್ಚಾವಣಿಗಳು, ಅವನ್ನು ಎತ್ತಿ ಹಿಡಿದಿರುವ ನೀಳವಾದ ಕಂಬಗಳು, ಬಣ್ಣಬಣ್ಣದ ಗಾಜಿನ ಕಿಟಕಿಗಳು ಮತ್ತು ಅವುಗಳಿಂದ ಬರುವ ವರ್ಣರಂಜಿತ ಕಿರಣಗಳು ಇಡೀ ಕಟ್ಟಡಕ್ಕೆ ಒಂದು ಹೊಸ ಚೈತನ್ಯವನ್ನು ತಂದಿತ್ತುವು.
ಗಾತಿಕ್ ಕಾಲದ ಹೆಚ್ಚಿನ ಶಿಲ್ಪಗಳು ಧಾರ್ಮಿಕ ರೀತಿಯವು-ಅವುಗಳಲ್ಲೂ ಚರ್ಚ್‍ಗಳು ಮತ್ತು ಗೋರಿಕಲ್ಲುಗಳ ಅಲಂಕರಣಕ್ಕೆ ಬಳಸಿದಂಥವು. ಕ್ರೈಸ್ತ ಸಂಪ್ರದಾಯದ ಮೇರಿ ಮತ್ತು ಮಗು, ಯೇಸುವಿನ ಮರಣವೇ ಮುಂತಾದ ಪುರಾಣ ಕಥೆಗಳು, ಸಂತರ ವಿಗ್ರಹಗಳು ವಿಶೇಷವಾಗಿ ಈ ಶಿಲ್ಪಗಳಲ್ಲಿನ ವಸ್ತು. ಶಿಲ್ಪಗಳಲ್ಲಿ ಹಿಂದಿನ ರೋಮನೆಸ್ಕ್ ಶೈಲಿಯ ಸೊಗಸು ಮೊದಮೊದಲು ಕಂಡುಬಂದರು ಗಾತಿಕ್ ಕಾಲದ ಅಂತ್ಯಭಾಗದಲ್ಲಿ ಇವು ನಿರೂಪಣೆಯಲ್ಲಿ ಹೆಚ್ಚು ಸ್ನಿಗ್ಧವಾದುವು. ಆಧ್ಯಾತ್ಮ ಭಾವನೆ ಪ್ರಧಾನವಾಗಿ ಎಲ್ಲ ಶಿಲ್ಪಗಳಲ್ಲೂ ಎದ್ದು ಕಾಣುವುದಲ್ಲದೆ, ವಸ್ತುವಿಗಿಂತಲೂ ಭಾವದ ಪ್ರಕಟಣೆಯೇ ಶಿಲ್ಪಗಳ ಗುರಿಯಾಗುತ್ತದೆ. ಅನೇಕ ಎಡೆಗಳಲ್ಲಿರುವ ಬಿಷಪ್ ಮತ್ತು ಪಾದ್ರಿಗಳ ವಿಗ್ರಹಗಳಲ್ಲಿ ಇದನ್ನು ಚೆನ್ನಾಗಿ ಗುರುತಿಸಬಹುದು. ಇವುಗಳಲ್ಲಿ ಆಯಾ ವ್ಯಕ್ತಿಗಳ ಪ್ರತಿಕೃತಿ ನಿರೂಪಣೆಗಿಂತಲು ಸಂತತ್ವದ ಅಥವಾ ಸಂನ್ಯಾಸತ್ವದ ನಿರೂಪಣಾ ದೃಷ್ಟಿಯಿಂದ ನಮ್ರಭಾವ, ಕೃಶ ಶರೀರ ಇತ್ಯಾದಿ ಭಾವಗಳನ್ನು ಚಿತ್ರಿಸಿರುವುದೇ ಕಂಡುಬರುತ್ತದೆ. ಗಾತಿಕ್ ಯುಗದ ಮೊದಲ ಶಿಲ್ಪಗಳು ವಾಸ್ತುವಿನೊಡನೆ ಹೊಂದಿಕೊಂಡಂತೆಯೇ ಕಂಡುಬರುವುದಾದರೂ ಕೊನೆಕೊನೆಗೆ ಇಲ್ಲಿ ಶಿಲ್ಪಕ್ಕೂ ಚಿತ್ರಕಲೆಗೂ ಹೆಚ್ಚಿನ ಸಂಬಂಧ ಬೆಳೆದು ಅನೇಕ ಶಿಲ್ಪಗಳನ್ನು ವರ್ಣಗಳಿಂದ ಅಲಂಕರಿಸುವ ಪದ್ಧತಿ ರೂಢಿಯಾಯಿತು. ಜರ್ಮನಿಯಲ್ಲಿ ಗಾತಿಕ್ ಸಂಪ್ರದಾಯದ ಶಿಲ್ಪ 13ನೆಯ ಶತಮಾನದಲ್ಲಿ ಪ್ರಾರಂಭವಾಯಿತು. ಸ್ಟ್ರಾಸ್‍ಬರ್ಗ್ ಮತ್ತು ಬ್ಯಾಂಬರ್ಗ್‍ನ ಕತೀಡ್ರಲ್‍ಗಳಲ್ಲಿರುವ ಈ ಕಾಲದ ಪ್ರಾಚೀನ ಶಿಲ್ಪಗಳಲ್ಲಿ ಫ್ರೆಂಚ್ ಗಾತಿಕ್ ಶಿಲ್ಪಶೈಲಿಯ ಪ್ರಭಾವ ಎದ್ದು ಕಾಣುತ್ತದೆ. ವಾಸ್ತುವಿಗೂ ಶಿಲ್ಪಕ್ಕೂ ಕಲ್ಪಿಸಿರುವ ಹಿತ ಸಮತೋಲ ಈ ಕೃತಿಗಳ ವೈಶಿಷ್ಟ್ಯ. ಆದರೆ 13ನೆಯ ಶತಮಾನದ ಕೊನೆಯ ಭಾಗದಲ್ಲಿ ಶಿಲ್ಪಗಳು ವಾಸ್ತುರಚನೆಗಳಿಗೆ ಸೇರಿದಂತಿದ್ದರೂ ಮುಂದೆ ಅವನ್ನೇ ವಿಶಿಷ್ಟವಾಗಿ ನಿರೂಪಿಸುವ ಸಂಪ್ರದಾಯ ಬೆಳೆಯಿತು. ಹೆಚ್ಚಿನ ಶಿಲ್ಪಗಳೂ ಚರ್ಚ್‍ಗಳು ಒಳ ಮತ್ತು ಹೊರಮೈಗಳಲ್ಲಿ ಕಂಡುಬರದೆ ಕೇವಲ ಮುಂದಣ ಹಜಾರದಲ್ಲಿ ಕೇಂದ್ರಿಕೃತವಾಗಲಾರಂಭಿಸಿದುವು. ಇದರಿಂದ ಒಂದೊಂದು ಶಿಲ್ಪಕ್ಕೂ ಹೆಚ್ಚಿನ ಗಮನ ಸಿಕ್ಕು ಶಿಲ್ಪವೇ ಪ್ರಧಾನವಾಗಿ, ಪ್ರಭಾವಿಯಾಗಿ ರೂಪಿತವಾಗಲು ಸಾಧ್ಯವಾಯಿತು. ಸ್ಟ್ರಾಸ್‍ಬರ್ಗ್ ಕತೀಡ್ರಲ್‍ನ ಪಶ್ಚಿಮ ಮುಖ (ಸು. 1280), ಮಾರ್ಬರ್ಗ್ ಕತೀಡ್ರಲ್‍ನ (ಸು.1290) ಮುಮ್ಮುಖದಲ್ಲಿರುವ ಶಿಲ್ಪಗಳು ಇದಕ್ಕೆ ಒಳ್ಳೆಯ ಉದಾಹರಣೆಗಳು. ಈ ಶೈಲಿ 14 ಮತ್ತು 15ನೆಯ ಶತಮಾನಗಳಲ್ಲಿ ಮುಂದುವರಿಯಿತಾದರೂ ಅಂದು ಬಹಿನಿಷ್ಣಾತರೆನಿಸಿದ್ದ ಪಾರ್ಲರ್ ಮನೆತನದ ಶಿಲ್ಪಗಳು ತತ್ಕಾಲೀನ ಶಿಲ್ಪಸಂಪ್ರದಾಯದಲ್ಲಿ ಕೆಲವು ಕೆಲಸ ಅವಿಷ್ಕಾರಗಳಿಗೆ ಕಾರಣರಾಗಿದ್ದಾರೆ. ಆ ವಂಶದವರಲ್ಲಿ ಹೈನ್‍ರಿಖ್ ಪಾರ್ಲರ್ ಮತ್ತು ಪೀಟರ್ ಪಾರ್ಲರ್ ಮುಖ್ಯ ಶಿಲ್ಪಿಗಳು. ಪೀಟರ್ ಪಾರ್ಲರ್ ಗಾತಿಕ್ ಸಂಪ್ರದಾಯದ 'ಮೃದುಶೈಲಿ ಎಂಬ ಒಂದು ಹೊಸರೀತಿಯನ್ನೇ ಪ್ರಾರಂಭಿಸಿದ. ಸೇಂಟ್ ವೇಟಸ್‍ನ ಕತೀಡ್ರಲ್‍ನಲ್ಲಿರುವ ಶಿಲ್ಪಗಳು ಮತ್ತು ಈಗ ಲೆನಿನ್‍ಗ್ರಾಡಿನ ಹರ್ಮಿಟೇಜಿನಲ್ಲಿರುವ ಕೆಲವು ಮಡಾನ ಶಿಲ್ಪಗಳು ಈ ಕಾಲದ ಶಿಲ್ಪರಾಶಿಯಲ್ಲಿ ಅತ್ಯುತ್ತಮವಾದವು. ಈ ಕಾಲದ ಕೆಲವು ದಾರುಶಿಲ್ಪಗಳೂ ಉಳಿದುಬಂದಿವೆ.

	ಕಲೋನ್ ಮತ್ತು ಬೋಹೀಮೀಯಗಳು ಜರ್ಮನಿಯ ಗಾತಿಕ್ ಚಿತ್ರಕಲೆಯ ಕೇಂದ್ರಗಳು. ಬೋಹೀಮೀಯದ ಹೊಹೆನ್ ಫರ್ತ್‍ನ ಚರ್ಚ್ ಒಂದರಲ್ಲಿರುವ ಕೆಲವು ಚಿತ್ರಗಳು ( ಸು 1345), ಬರ್ಲಿನ್ನಿನಲ್ಲಿರುವ ಯೇಸುವನ್ನು ಶಿಲುಬೆಗೇರಿಸುವ ಚಿತ್ರ (ಸು.1350) ಗಾತಿಕ್ ಸಂಪ್ರದಾಯದ ಉತ್ತಮ ವರ್ಣಚಿತ್ರಗಳು. ಇವುಗಳಲ್ಲಿ ಸಾಮಾನ್ಯ ಗಾತಿಕ್ ರೀತಿಯ ಜೊತೆಗೆ ಇಟಲಿಯ ಸಮಕಾಲೀನ ಚಿತ್ರರೀತಿಗಳ ಪ್ರಭಾವ ಸಹ ಕಂಡುಬರುತ್ತದೆ. 1400ರ ಸುಮಾರಿನಲ್ಲಿ ಕಲೋನಿನಲ್ಲಿ ಚಿತ್ರರೀತಿಗಳ ಪ್ರಭಾವವಾದ ಒಂದು ಚಿತ್ರಶೈಲಿ 15ನೆಯ ಶತಮಾನದ ಜರ್ಮನಿಯ ಚಿತ್ರಕಲೆಯನ್ನು ರೂಪಿಸಿತು. ಮನೋಹರವಾದ ಭಾರರಹಿತ ರೂಪು ಮತ್ತು ಶ್ರೀಮಂತ ಗಾಂಭೀರ್ಯದ ನಿರೂಪಣೆ ಈ ಶೈಲಿಯ ವೈಶಿಷ್ಟ್ಯ. ಮ್ಯೂನಿಕ್‍ನಲ್ಲಿರುವ ಸೇಂಟ್ ವೆರೋನಿಕ ಚಿತ್ರ ಈ ಶೈಲಿಯ ಒಳ್ಳೆಯ ಉದಾಹರಣೆ. ಸ್ಟಿಫನ್ ಲೋಕ್ನರ್, ಮಾರ್ಟಿನ್ ಷೋಂಗಾಯರ್ , ಜಾನ್ ಪೊಲಕ್, ಫ್ರಾಫ್ ಸೋದರರು ಈ ಕಾಲದ ಪ್ರಸಿದ್ಧ ಚಿತ್ರಗಾರರು. ಗಾತಿಕ್ ಸಂಪ್ರದಾಯದ ಕೊನೆಯ ಪ್ರಸಿದ್ಧ ಚಿತ್ರಗಾರ ಹ್ಯಾನ್ಸ್ ಹಾಲ್ಟೀಮ್, ವೈನ್ ಗಾರ್ಟೆನ್ (1493) ಮತ್ತು ಫ್ರಾಂಕ್ ಫರ್ಟ್ ಮುಂತಾದೆಡೆಗಳಲ್ಲಿರುವ ಇವನ ಚಿತ್ರಗಳು ಈ ಶೈಲಿಯಲ್ಲಿದ್ದರೂ ಈತ ಇಟಲಿಯ ಪುನರುಜ್ಜೀವನ ಶೈಲಿಯನ್ನು ಜರ್ಮನಿಯಲ್ಲಿ ಹುಟ್ಟುಹಾಕಿದವನೆಂದೂ ಪ್ರಸಿದ್ಧನಾಗಿದ್ದಾನೆ.

	16ನೆಯ ಶತಮಾನ ಜರ್ಮನ್ ಕಲಾ ಇತಿಹಾಸದಲ್ಲಿ ಪುನರುಜ್ಜೀವನ ಕಾಲ. ವೈವಿಧ್ಯ ಈ ಕಾಲದ ಲಕ್ಷಣ. ವಿಶಾಲವೂ ಆಲಂಕಾರಿಕವು ಆದ ಗಾತಿಕ್ ಶೈಲಿಯ ಕಟ್ಟಡಗಳ ನಿರ್ಮಾಣ ಉತ್ತರ ಜರ್ಮನಿಯಲ್ಲಿ ಮುಂದುವರಿಯಿತು. ಜರ್ಮನಿಯ ದಕ್ಷಿಣ ಮತ್ತು ಪೂರ್ವಭಾಗಗಳಲ್ಲೂ ಗಾತಿಕ್ ಶೈಲಿಯ ಕಟ್ಟಡಗಳ ನಿರ್ಮಾಣ ಮುಂದುವರಿಯಿತಾದರೂ ಈ ಪ್ರದೇಶದಲ್ಲಿ ಇಟಾಲಿಯನ್ ಶಿಲ್ಪಿಗಳು ಪುನರುಜ್ಜೀವನ ಕಲೆಯ ಶೈಲಿಯ ಕಟ್ಟಡಗಳನ್ನೂ ಕಟ್ಟಲು ಪ್ರಾರಂಭಿಸಿದರು. ಜರ್ಮನಿಯ ಮೊಟ್ಟಮೊದಲ ಪುನರುಜ್ಜೀವನ ಕಟ್ಟಡವೆಂದರೆ ಆಗ್ಸ್ ಬರ್ಗ್‍ನಲ್ಲಿರುವ ವನೀಷನ್ ಮಾದರಿಯ, ಫುಗರ್ ವಂಶದ ಸಮಾಧಿ ಮಂದಿರ (1509-18). (ಆದರೆ ಅದೇ ಸ್ಥಳದ ಡಾಮಿನಿಕನ್ ಇಗರ್ಜಿ (1512-15) ಗಾತಿಕ್ ಶೈಲಿಯಲ್ಲಿದೆ) ಕಾನ್ರಾಡ್ ಕ್ರೆಬ್ಸ್ ಕ್ಯಾಸ್ಟರ್ ತೈನ್ ಮುಂತಾದವರು ಪುನರುಜ್ಜೀವನ ಶೈಲಿಯ ಮುಖ್ಯ ಶಿಲ್ಪಿಗಳು. ಇವರಲ್ಲಿ ಕ್ರೆಬ್ಸ್ ಕಟ್ಟಿದ ಹಾರ್ಟನ್‍ಫೆಲ್ಸ್ ಅರಮನೆ ಮುಖ್ಯವಾದದ್ದು.

	16ನೆಯ ಶತಮಾನದ ಜರ್ಮನ್ ವಾಸ್ತು ಇತಿಹಾಸದಲ್ಲಿ ಮತೀಯ ಕಟ್ಟಡಗಳ ಜೊತೆಗೆ ಇತರ ಲೌಕಿಕ ಕಟ್ಟಡಗಳೂ ಪ್ರಮುಖವಾಗಿವೆ. ಲುಡ್ವಿಗ್‍ವುಲ್ಫ್ ಎಂಬಾತ ಕಟ್ಟಿದ ರೋಟ್ರೆನ್‍ಬರ್ಗ್‍ನ ಪುರಭವನ ಮತ್ತು ನ್ಯೂರೆಂಬರ್ಗ್‍ನ ಗಾರ್ಡನ್ ಹಾಲ್ ಪುನರುಜ್ಜೀವನ ಶೈಲಿಯವುಗಳಲ್ಲಿ ಮುಖ್ಯವಾದವು. ದಕ್ಷಿಣ ಮತ್ತು ಪೂರ್ವ ಜರ್ಮನಿಯಲ್ಲಿ ನೆದರ್‍ಲೆಂಡ್ ಶೈಲಿಯ ಕಟ್ಟಡಗಳ ಮಾದರಿಯನ್ನು ಅನುಸರಿಸಿ ಇಟ್ಟಿಗೆ ಮತ್ತು ತುಂಡು ಅಥವಾ ಚದರಗಲ್ಲುಗಳಿಂದ ಅನೇಕ ಕಟ್ಟಡಗಳನ್ನು ಈ ಕಾಲದಲ್ಲಿ ನಿರ್ಮಿಸಲಾಯಿತು. ಕಟ್ಟಡ ಅಲಂಕರಣದಲ್ಲಿ ಹೊಸ ರೀತಿಯ ಆಕೃತಿಗಳು ವ್ಯಕ್ತವಾದುವು. ಈ ವಿಧದ ಕಟ್ಟಡಗಳಲ್ಲಿ ಅತ್ಯಂತ ಆಕರ್ಷಕವೂ ಸುಂದರವೂ ಆದುವೆಂದರೆ ಬ್ರೆನ್ ಮೆನ್ ಮತ್ತು ಡೇನಿಜ್‍ಗಳ ಪುರಭವನಗಳು, ಹೈಡೆಲ್‍ಬರ್ಗ್‍ನ ಕ್ಯಾಸೆಲ್ ಇತ್ಯಾದಿ. ಜರ್ಮನಿಯ ಪುನರುಜ್ಜೀವನ ಶೈಲಿಯ ವಾಸ್ತು ಎಲಿಯಸ್ ಹಾಲ್ ಎಂಬ ಶಿಲ್ಪಿಯ ನಿರ್ಮಾಣಗಳಲ್ಲಿ ಪರಾಕಾಷ್ಠೆಯನ್ನು ಮುಟ್ಟಿತು. ಆಗ್ಸ್‍ಬರ್ಗ್‍ನ ಪುರಭವನ ಇವನ ಮೇರುಕೃತಿ. ಮ್ಯೂನಿಕ್‍ನಲ್ಲಿ ವನೀಷನ್ ಮಾದರಿ ಕಟ್ಟಡಗಳಿಗಿಂತ ರೋಮನ್ ಮಾದರಿಯ ಕಟ್ಟಡಗಳು ಹೆಚ್ಚಿಗೆ ಪ್ರಭಾವವನ್ನು ಬೀರಿದವು. ಮೊಟ್ಟಮೊದಲು ಜರ್ಮನ್ ವಸ್ತುಸಂಗ್ರಹಾಲಯದ ಕಟ್ಟಡ ಆಂಟಿಕ್ವೇರಿಯಂ ಮತ್ತು ಸೇಂಟ್ ಮೈಕಲ್ ಚರ್ಚ್ ಇವು ಅರ್ಧ ಪಿಪಾಯಿತ ಆಕಾರದ ಮೇಲ್ಛಾವಣಿಗಳನ್ನು ಹೊಂದಿವೆ.

	16ನೆಯ ಶತಮಾನದ ಆದಿಭಾಗದಲ್ಲಿದ್ದ ಡ್ಯೂರರ್, ಗ್ರೂನೆನಾಲ್ಟ್ ಮತ್ತು ಹೋಲ್ಟೈನ್ ಎಂಬ ಮೂವರು ಚಿತ್ರಕಾರರ ಕೃತಿಗಳಲ್ಲಿ ಜರ್ಮನ್ ಕಲೆಯ ಸಾಮಥ್ರ್ಯ ಪ್ರಕಟವಾಯಿತು. ಈ ಮೂರೂ ಚಿತ್ರಕಾರರ ಕೃತಿಗಳನ್ನು ನಿಜವಾದ ಜರ್ಮನ್ ಕಲೆಯ ಪ್ರತಿನಿಧಿಗಳು ಎಂದು ಪರಿಗಣಿಸಬಹುದು. ರ್ಯಾಫೀಯಲ್ ಮೆಕೆಲೇಂಜಲೋ ಅವರ ಕೃತಿಗಳಂತೆ ಈ ಮೂವರು ಚಿತ್ರಗಾರರ ರಚನೆಗಳು ಹೊಸ ಶೈಲಿಯ ಅಧ್ಯಾಯವನ್ನೇನೂ ಪ್ರಾರಂಭಿಸಲಿಲ್ಲವಾದರೂ ಇವರ ಕೃತಿಗಳಲ್ಲಿ ಜರ್ಮನ್ ಕಲೆ ಎಂದೂ ಕಾಣದ ಪರಿಪೂರ್ಣತೆಯನ್ನು ಕಂಡಿತು. ಚಿತ್ರಯುತ ಗ್ರಂಥಗಳನ್ನು ನಿರ್ಮಿಸಿದ ಹ್ಯಾನ್ಸ್ ಲಿಯೊನಾರ್ಡ್ ಷೋಪೆಲೈನ್, ತಾಮ್ರದ ಫಲಕಗಳ ಮೇಲೆ ಕೆತ್ತನೆ ಮಾಡಿರುವ ಸಿûೀಬಾಲ್ಡ್ ಬೀಹ್ಯಾಮ್ ಮುಂತಾದವರು ಡ್ಯೂರರನ ಶಿಷ್ಯರು. ಇವನ ಶಿಷ್ಯರಲ್ಲಿ ಪ್ರಖ್ಯಾತನಾದ ಮತ್ತೊಬ್ಬನೆಂದರೆ ಹ್ಯಾನ್ಸ್ ಬಾಲ್ಡುಂಗ್ ಗ್ರೀನ್.

	ಹಾಲೆ ಕತೀಡ್ರಲ್‍ನ ಪವಿತ್ರ ಪೀಠದ ಮೇಲಿರುವ ಚಿತ್ರಗಳು ಪ್ರಚೋದಿಸುವ ಮತ್ತು ಎದ್ದು ಕಾಣುವ ಬಣ್ಣ್ಣಗಳಿಂದ ಕೂಡಿದ್ದು ಇವನ ಉತ್ತಮ ರಚನೆಗಳಾಗಿವೆ. ಹ್ಯಾನ್ಸ್ ಬರ್ಕ್‍ಮೈರ್ ಎಂಬಾತ ಪುನರುಜ್ಜೀವನದ ಕಾಲದ ಮತ್ತೊಬ್ಬ ಚಿತ್ರಕಾರ. ಈತ ಇಟಾಲಿಯನ್ ಪುನರುಜ್ಜೀವನ ಶೈಲಿಯ ವಾಸ್ತುಶಿಲ್ಪ ಮತ್ತು ಅಲಂಕರಣ ವಿಧಾನಗಳನ್ನು ಜರ್ಮನ್ ಶೈಲಿಗೆ ಅಳವಡಿಸಿದ. ಆಗ್ಸ್‍ಬರ್ಗ್‍ನ ಮೂರು ಕ್ರೈಸ್ತ ದೇವಾಲಯಗಳಲ್ಲಿನ ಈತನ ಚಿತ್ರಗಳು ಇಟಾಲಿಯನ್ 
ಪುನರುಜ್ಜೀವನ ಶೈಲಿಯ ಪ್ರಭಾವವನ್ನು ಹೊಂದಿವೆ. ಇಟಾಲಿಯನ್ ಚಿತ್ರಕಲೆಯ ಶಾಂತ ತೇಜಸ್ಸು ಮತ್ತು ಜರ್ಮನ್ ಕನ್ನೆಯ ಚೆಲುವು ಇವೆರಡೂ ಕೂಡಿರುವ ನ್ಯೂರೆಂಬರ್ಗ್‍ನ ಮೇರಿಯ ಚಿತ್ರ ಇವನ ಮೇರುಕೃತಿ.

	ಜರ್ಮನ್ ಶಿಲ್ಪಕಲೆಯ ಮೇಲೆ ಇಟಾಲಿಯನ್ ಪುನರುಜ್ಜೀವನ ಕಲೆಯ ಪ್ರಭಾವ ಆಗ್ಸ್ ಬರ್ಗ್ ಮೂಲಕ ಆಯಿತು. ಇಲ್ಲಿಯೇ ಅನೇಕ ಮಂದಿ ಶಿಲ್ಪಿಗಳು ಪುನರುಜ್ಜೀವನ ಶೈಲಿಯ ಶಿಲ್ಪಕಲೆಯಲ್ಲಿ ತರಬೇತಿ ಹೊಂದಿದರು. ಸೆಬಾಸ್ಟಿಯನ್ ಲೋಷರ್, ವಿಕ್ಟರ್ ಕೇಜರ್ ಇತ್ಯಾದಿ ಇನ್ನೂ ಆನೇಕ ಶಿಲ್ಪಿಗಳು ಪುನರುಜ್ಜೀವನ ಶೈಲಿಯ ಶಿಲ್ಪಕಲೆಯಲ್ಲಿ ನುರಿತವರು. ಇವರ ಶಿಲ್ಪದ ಮೂರ್ತಿಭಾಗಕ್ಕಿಂತ ಆಲಂಕಾರಿಕ ಭಾಗಗಳಲ್ಲಿಯೇ ಹೆಚ್ಚಾಗಿ ಪುನರುಜ್ಜೀವನ ಕಲೆಯ ಪ್ರಭಾವ ಕಾಣುತ್ತದೆ. ಜರ್ಮನ್ ಚಕ್ರವರ್ತಿ ಮಾಕ್ಸಿಮಿಲಿಯನ್ ಮೊದಲ ಬಾರಿಗೆ ಮನುಷ್ಯ ಶಿಲ್ಪಗಳ ಬಗ್ಗೆ ಪ್ರಚಾರ ನಡೆಸಿದ. ಇವನ ಆಶ್ರಯದಲ್ಲಿ ಪುನರುಜ್ಜೀವನ ಶೈಲಿಯ ಪ್ರಭಾವವನ್ನು ಹೊಂದಿರುವ ಅನೇಕ ಪೂರ್ವಜರ, ಪೋಪರ ಮತ್ತು ಬಿಷಪರ ಶಿಲ್ಪಗಳು ಸಹಜಾಕೃತಿಗೂ ಮೀರಿದ ಅಳತೆಯಲ್ಲಿ ನಿರ್ಮಿಸಲ್ಪಟ್ಟವು. ಶ್ರೈಬರ್ ಎಂಬಾತನ ನೇತೃತ್ವದಲ್ಲಿ ಒಂದು ಪ್ರತ್ಯೇಕ ಕಾರ್ಯಾಗಾರವೂ ಇದಕ್ಕಾಗಿ ನಿರ್ಮಾಣವಾಯಿತು.

	16ನೆಯ ಶತಮಾನದ ಉತ್ತರಾರ್ಧದಲ್ಲಿ ಜರ್ಮನ್ ಶಿಲ್ಪಕಲೆಯಲ್ಲಿ ರಚನಾತ್ಮಕ ಮನೋಭಾವ ಸ್ವಲ್ಪವಾಗಿ ಕಡಿಮೆಯಾಯಿತು. ಆ ಕಾಲದ ಕಲೆಯಲ್ಲಿ ಇಟಾಲಿಯನ್ ಶೈಲಿಗೆ ಹೊಂದಿಕೆ ಇರುವ ನೆದರ್‍ಲೆಂಡಿನ ಶಿಲ್ಪದ ಪ್ರಭಾವ ಪ್ರಾರಂಭವಾಯಿತು. ಕಾರ್ನೆಲಿಸ್ ಫ್ಲೋರಿಸ್ ಎಂಬ ಶಿಲ್ಪಿ ನೆದರ್‍ಲೆಂಡಿನ ಶಿಲ್ಪಕಲೆಯನ್ನು ಜನಪ್ರಿಯಗೊಳಿಸಿದ. ಡೆನ್ಮಾರ್ಕಿನ ರಾಜ ಫ್ರೆಡರಿಕ್‍ನ ಸಮಾಧಿ ಮತ್ತು ಪ್ರಷ್ಠದ ಡ್ಯೂಕ್ ಆಲ್ಬರ್ಟನ ಸಮಾಧಿ ಇವನ ಕೃತಿಗಳು. ಆದರೆ ದಕ್ಷಿಣ ಜರ್ಮನಿಯಲ್ಲಿ ಮಾತ್ರ ನಿಜವಾದ ಜರ್ಮನ್ ಶಿಲ್ಪಕಲೆ 16ನೆಯ ಶತಮಾನದ ಉತ್ತರಾರ್ಧದ ಕಂಚಿನ ಶಿಲ್ಪಗಳಲ್ಲಿ ಮುಂದುವರಿಯಿತು. ಜೋಕಿಮ್ ಫಾಸ್ರ್ಟರ್, ಪಂಕ್ರಾಟ್ಸ್ ಲಾಬನ್‍ವುಲ್ಟ್ ಮುಂತಾದವರು ಮೂಲ ಜರ್ಮನ್ ಶಿಲ್ಪಶೈಲಿಯನ್ನು ಮುಂದುವರಿಸಿಕೊಂಡು ಬಂದರು.

	17ನೆಯ ಶತಮಾನದ ಪೂರ್ತ ಜರ್ಮನ್ ಕಲೆಯ ಬೆಳವಣಿಗೆಯ ಮೇಲೆ ಮೂವತ್ತು ವರ್ಷಗಳ ಯುದ್ಧ ಮಬ್ಬು ಕವಿಸಿತ್ತು. ಆದರೆ ಹದಿನೆಂಟನೆಯ ಶತಮಾನದ ಆದಿ ಭಾಗದಲ್ಲಿ ಬರೋಕ್ ಮತ್ತು ರೊಕೋಕೋ ಶೈಲಿಗಳು ಬೀರಿದ ಪ್ರಬಾವ ಜರ್ಮನ್ ಕಲೆಗೆ ಒಂದು ಹೊಸ ಚೈತನ್ಯವನ್ನು ಮೂಡಿಸಿತು. ವಿವಿಧ ಶೈಲಿಗಳ ಸಮ್ಮಿಳನದಿಂದ ಕೂಡಿದ, ನೂತನ ಧಾರ್ಮಿಕ ಮತ್ತು ಲೌಕಿಕ ಕಟ್ಟಡಗಳು ಅನೆಕ ಪಟ್ಟಣಗಳಲ್ಲಿ ನಿರ್ಮಿತವಾದವು. ಸಮ್ಮಿಶ್ರಿತ ಸ್ಪರೂಪವುಳ್ಳ ಮತ್ತು ಸಮೃದ್ಧವಾದ ಕೆತ್ತನೆಗಳುಳ್ಳ ಬರೋಕ್ ಶೈಲಿ ಮತ್ತು ಹೆಚ್ಚಾಗಿ ಒಳಲಂಕರಣಕ್ಕೆ ಸೀಮಿತವಾದ ಹಾಗೂ ಬರೊಕ್ ಶೈಲಿಯ ಶಾಖೆಯಾದ ರೊಕೋಕೋ ಶೈಲಿಗಳು ಜರ್ಮನಿಯಲ್ಲಿ ಅತ್ಯಂತ ಜನಪ್ರಿಯವಾದುವು. ಈ ಎರಡೂ ಕಲೆಗಳಿಂದ ಪ್ರಭಾವಿತವಾದ ಜರ್ಮನ್ ವಾಸ್ತುಶಿಲ್ಪದಲ್ಲಿ ಅನೇಕ ವೈಭವೋಪೇತವಾದ ಅರಮನೆಗಳು, ಕತೀಡ್ರಲ್ಗಳು, ಕೈತೋಟಗಳು ಮತ್ತು ಅಚ್ಚುಕಟ್ಟಾದ ಮಾರ್ಗಗಳು ನಿರ್ಮಾಣಗೊಂಡವು. ಫ್ರಾನ್ಸನಲ್ಲಿ ಹುಟ್ಟಿದ ರೊಕೋಕೋ ಶೈಲಿಯ ಅಲಂಕರಣ ಮಾದರಿಗಳನ್ನು ಜರ್ಮನಿಯ ಕಟ್ಟಡಗಳ ಒಳಲಂಕರಣದಲ್ಲಿ ಮಿತಿಮೀರಿ ಉಪಯೋಗಿಸಲಾಯಿತು.

	ಬ್ಯಾಂಬರ್ಗ್, ವಿಯೆನ್ನ, ಸಾಲ್‍ಟ್ಸ್‍ಬರ್ಗ್ ಮುಂತಾದೆಡೆ ಇರುವ ಕ್ಯಾತೊಲಿಕ್ ಇಗರ್ಜಿಗಳು ಮತ್ತು ಡ್ರೆಸ್‍ಡೆನ್, ಹ್ಯಾಂಬರ್ಗ್‍ಗಳಲ್ಲಿರುವ ಪ್ರಾಟೆಸ್ಟಂಟ್ ಇಗರ್ಜಿಗಳು ಬರೋಕ್ ಶೈಲಿಯ ಅನೇಕ ಇಗರ್ಜಿಗಳಲ್ಲಿ ಮುಖ್ಯವಾದುವು. ಜೊಹಾನ್ ಬಿ. ಫಿಷರ್, ಫಾನ್ ಎರ್ಲಾಕ್, ಲೂಕಾಸ್ ಹೈಡಲ್‍ಬ್ರಾಂಟ್ ಮುಂತಾದ ಶಿಲ್ಪಗಳು ಆಸ್ಟ್ರಿಯ ಮತ್ತು ದಕ್ಷೀಣ ಜರ್ಮನಿಯ ಮುಖ್ಯವಾದ ಬರೋಕ್ ಶೈಲಿಯ ವಾಸ್ತು ನಿರ್ಮಾಪಕರು. ಪಾಟ್ಸ್‍ಡ್ಯಾಮ್‍ನ ಫ್ರೆಡರಿಕ್ ಮಹಾಶಯನ ಸ್ಯಾನ್ಸ್‍ಸೋಸಿ ಎಂಬುದು ರೊಕೋಕೋ ಕಲಾಶೈಲಿಯ ಮುಖ್ಯ ಕೇಂದ್ರ. ಜೊಹಾನ್ ಕ್ರಿಶ್ಚನ್ ಹೋಪೆನ್ ಹಾಪ್ಟ್ ಎಂಬ ಕಲೆಗಾರ ರೊಕೋಕೋ ಮಾದರಿಯ ಒಳಾಲಂಕರಣ ಕಲೆಯಲ್ಲಿ ಪ್ರವೀಣನಾಗಿದ್ದ.

	17ನೆಯ ಶತಮಾನದಲ್ಲಿ ಆದ ವಾಸ್ತುಶಿಲ್ಪದ ಬೆಳವಣಿಗೆಯೊಡನೆ ಹೋಲಿಸಿದರೆ ಮೂರ್ತಿಶಿಲ್ಪದ ಬೆಳೆವಣಿಗೆ ಕಡಿಮೆಯಾಗಿ ಕಾಣುತ್ತದೆ, ಈ ಕಾಲದಲ್ಲಿ ಸಾಮಾನ್ಯವಾಗಿ ಇಟಲಿ ಮತ್ತು ಇತರ ಭಾಗಗಳಿಂದ ಆಹ್ವಾನಿತರಾದವರು ರಚಿಸಿದ ಶಿಲ್ಪಗಳೇ ಹೆಚ್ಚು. ಬರೋಕ್ ಮತ್ತು ರೊಕೋಕೋ ಶೈಲಿಯ ಈ ಕಾಲದ ಉತ್ತಮ ಶಿಲ್ಪಗಳು ಬಹಳ ವಿರಳ. ಆಂಡ್ರಿಯಾಸ್ ಷ್ಲ್ಯೂಬರ್, ಬಲ್‍ಥಸಾರ್ ಪರ್ ಮೋಸರ್, ಜಾರ್ಜ್ ಆರ್. ಡೋನರ್ ಇತ್ಯಾದಿ ಕೆಲವರು ಈ ಕಾಲದ ಅಗ್ರಮಾನ್ಯ ಶಿಲ್ಪಗಳು. ನಿಖರವಾಗಿ ಹೇಳುವುದಾದರೆ ಈ ಕಾಲದಲ್ಲಿ ಬರೋಕ್ ಮತ್ತು ರೊಕೋಕೋ ಶೈಲಿಯ ಜರ್ಮನ್ ಚಿತ್ರಕಾರರೇ ಇಲ್ಲ. ಈ ಕಾಲದ ಎಲ್ಲ ಚರ್ಚ್‍ಗಳ ಒಳ ಮತ್ತು ಹೊರಾಲಂಕರಣಗಳು ಹೊರನಾಡಿನಿಂದ ಬಂದ ಜರ್ಮನೇತರ ಶಿಲ್ಪಗಳೇ ಮಾಡಿದಂಥವು. ಜೊವಾನಿ ಟೆಯೇಪಲೋ ಎಂಬಾತ ಇವರಲ್ಲೆಲ್ಲ ಹೆಸರು ವಾಸಿಯಾದವ. ಪಿಂಗಾಣಿ ಕೈಗಾರಿಕೆ ಈ ಕಾಲದಲ್ಲಿ ಪ್ರಗತಿ ಸಾಧಿಸಿತು. ಗಾತಿಕ್ ಕಾಲದಿಂದಲೂ ಜರ್ಮನರಲ್ಲಿ ಕಲಾ ಸೃಷ್ಟಿಯಲ್ಲಿ ಇದ್ದ ಸಿದ್ಧಿ ಮತ್ತು ಭಾವಪೂರಿತ ಸೂಕ್ಷ್ಮತೆ ಪಿಂಗಾಣಿ ಕಲೆಯಲ್ಲಿ ಚೆನ್ನಾಗಿ ವ್ಯಕ್ತವಾದುವು. ಜೊಹಾನ್ ಬಾಟ್ಗರ್ ಮತ್ತು ಏರಲ್‍ಫ್ರೀಟ್ ಬಿರ್ನ್‍ಹೌಸ್ ಎಂಬಿಬ್ಬರು ಯೂರೋಪಿನಲ್ಲೆಲ್ಲ ಮೊತ್ತ ಮೊದಲಾಗಿ ಪಿಂಗಾಣಿಯನ್ನು ತಯಾರಿಸಿದರು.

	ಈ ಕಾಲದ ಜರ್ಮನ್ ಮೂರ್ತಿಶಿಲ್ಪ ಮತ್ತು ವಾಸ್ತುಶಿಲ್ಪ ಕಲೆ ಇಟಾಲಿಯನ್ ಮತ್ತು ಫ್ರೆಂಚ್ ಕಲೆಗಳ ಪ್ರಭಾವದಲ್ಲಿ ಐಕ್ಯವಾಗಿ ಹೋಗಿತ್ತು. ಜರ್ಮನಿಯ ಕಲಾಸೃಷ್ಟಿಯಲ್ಲಿ ರೋಮನಸ್ಕ್ ಕಾಲದಲ್ಲಿದ್ದ ಜಾಗೃತಿ, ಸ್ವಂತಿಕೆ ಮತ್ತು ನೈಜ ಪ್ರತಿಭೆ ಮುದುಡಿಹೋಗಿತ್ತು. ಆದುದರಿಂದ ಇಡೀ ಪಾಶ್ಚಾತ್ಯ ಸಂಸ್ಕøತಿಯನ್ನೇ ಬದಲಿಸಿದ ಕ್ರಿ.ಶ. 1600-1750ರ ನಡುವಿನ ಸಂಧಿಕಾಲದಲ್ಲಿ ಜರ್ಮನರು ಕಲಾರಂಗದಲ್ಲಿ ಹಿಂದುಳಿದ್ದರಲ್ಲದೆ ಅವರ ಕಾಣಿಕೆಯೂ ಬಹು ಕಡಿಮೆಯಾಗಿತ್ತು.

	19ನೆಯ ಶತಮಾನದ ಗ್ರೀಕ್ ಪುನರುಜ್ಜೀವನ ವಾಸ್ತು ಜರ್ಮನಿಯಲ್ಲಿ ರೂಪಿತವಾಯಿತು. ಫಾನ್ ಕ್ಲೆನ್ಸ್ (1784-1864) ಮತ್ತು ಫಾನ್ ಷಿಂಕೆಲ್ ಇದರ ಪ್ರವರ್ತಕರು. ಮ್ಯೂನಿಕ್‍ನ ಪ್ರಾಪಿಲೇಯಿಯ, ಪಿನಕೊತೆಕ್, ಬರ್ಲಿನ್ನಿನ ಬ್ರ್ಯಾಂಡೆನ್‍ಬರ್ಗ್ ದ್ವಾರ, ಹಳೆಯ ಮ್ಯೂಸಿಯಮ್ ಈ ಸಂಪ್ರದಾಯದ ಉತ್ತಮ ಉದಾಹರಣೆಗಳು. ಅಲ್ಲದೆ ಗಾತಿಕ್‍ನ ಪುನರುಜ್ಜೀವನ ಸಹ ಸ್ವಲ್ಪ ಮಟ್ಟಿಗೆ ಈ ಕಾಲದಲ್ಲಿ ಉಂಟಾಯಿತು.

	ಶಿಲ್ಪ, ಚಿತ್ರಕಲೆ ಮುಂತಾದುವುಗಳಲ್ಲಿ ಅನೇಕ ಸಂಪ್ರದಾಯಗಳ ಸಂಗಮ ಸಂಘರ್ಷ ಕಂಡುಬರುವುದು ಈ ಕಾಲದ ವೈಶಿಷ್ಟ್ಯ. ಈ ಶತಮಾನದ ಆದಿಬಾಗದಲ್ಲಿ ನವ ಅಭಿಜಾತ ಸಂಪ್ರದಾಯ ಹಾಗೂ ರಮ್ಯ ಕಾಲ, ಜೊತೆಯಾಗಿ ರೂಢಿಯಲ್ಲಿದ್ದುವು. ಜೇಕಬ್ ಕಾರ್ಸೈನ್ಸ್, ಹೆನ್ರಿ ಫುಸೆಲಿ ಮೊದಲ ಸಂಪ್ರದಾಯದ ಮುಖ್ಯ ವಕ್ತಾರರಾದರೆ, ಆಟೋ ರುಂಗ್, ಪೀಟರ್ ಫಾನ್ ಕಾರ್ನೀಲಿಯಸ್, ಜೋಹಾನ್ ಫ್ರೀಡ್ರಿಕ್ ಓವರ್‍ಬೆಕ್ ಮೊದಲಾದವರು ರಮ್ಯ ಸಂಪ್ರದಾಯದ ಖ್ಯಾತ ಚಿತ್ರಕಾರರು.

	20ನೆಯ ಶತಮಾನದ ಆದಿಭಾಗದಿಂದ ವಾಸ್ತು ಹಾಗೂ ಕಲಾರಂಗದಲ್ಲಿ ಹೊಸ ಹೊಸರೀತಿಯ ರಚನೆಗಳು ಜರ್ಮನಿಯಲ್ಲೂ ಹುಟ್ಟಿವೆಯಾದರೂ ಈ ಕಲಾಸ್ಫೋಟ ಸಮಕಾಲೀನ ಪಾಶ್ಚಾತ್ಯ ದೇಶಗಳಲ್ಲೆಲ್ಲ ಸುಮಾರು ಏಕರೀತಿಯಲ್ಲಿ ಕಂಡುಬರುವುದರಿಂದ ಇಲ್ಲಿ ಜರ್ಮನಿಯ ವೈಶಿಷ್ಟ್ಯವನ್ನು ಗುರುತಿಲಾಗುವುದಿಲ್ಲ.			(ಎಂ.ಎಸ್.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ